ಜೀ ಕನ್ನಡ ವಾಹಿನಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವೀಕೆಂಡ್ ವಿಥ್ ರಮೇಶ್, ಡಿವೈಡೆಡ್ ಮತ್ತು ಲೈಫ್ ಸೂಪರ್ ಗುರೂ ಸೇರಿ ಅನೇಕ ಹೊಸ ಪ್ರಯತ್ನಗಳಿಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ೪ ರಿಂದ ಪ್ರಾರಂಭವಾಗುತ್ತಿರುವ ಸಿಂಪಲ್ಲಾಗೊಂದ್ ಸಿಂಗಿಂಗ್ ಷೋ ಎಂಬ ಮತ್ತೊಂದು ವಿನೂತನ ರಿಯಾಲಿಟಿ ಷೋ ಅರುಣ್ ಸಾಗರ್ ನಿರೂಪಣೆಯಲ್ಲಿ ಮೂಡಿ ಬರಲಿದೆ. ಈ ಶೋನಲ್ಲಿ ಒಟ್ಟು ನಾಲ್ಕು ರೌಂಡ್ಗಳಿರುತ್ತದೆ.
ಮೊದಲನೇ ಸುತ್ತಿನ ಹೆಸರು ಗಾನಾ ಬಜಾನಾ ಇದರಲ್ಲಿ ಸ್ಪರ್ಧಿಯು ವಿದೇಶಿಯರೊಬ್ಬರು ಹಾಡುವ ಕನ್ನಡ ಹಾಡನ್ನು ಕೇಳಿಸಿಕೊಂಡು ಸರಿಯಾದ ಸಾಹಿತ್ಯದೊಂದಿಗೆ ಹಾಡಬೇಕಾಗುತ್ತದೆ. ಇದರಲ್ಲಿ ಒಟ್ಟು ೪ ಸುತ್ತುಗಳಿದ್ದು ಪ್ರತಿ ಸುತ್ತಿಗೂ ೨೫೦೦ ರೂ ಬಹುಮಾನ ಇದೆ.
ಎರಡನೇ ಸುತ್ತಿನಲ್ಲಿ ಚಿತ್ರಗೀತೆ ಸ್ಪರ್ಧೆ. ಇದರಲ್ಲಿ ಯಾವುದಾದರೊಂದು ಹಾಡಿಗೆ ಸಂಬಂಧಿಸಿದಂತೆ ಒಂದಷ್ಟುಪೋಟೋಗಳನ್ನು ತೋರಿಸಲಾಗುತ್ತೆ. ಅದನ್ನು ನೋಡಿ ಸ್ಪರ್ಧಿ ಆ ಹಾಡನ್ನು ಹಾಡಬೇಕಾಗುತ್ತೆ. ಇಲ್ಲೂ ಕೂಡಾ ನಾಲ್ಕು ಸುತ್ತುಗಳಿದ್ದು ಪ್ರತಿ ಸುತ್ತಿಗೂ ೫೦೦೦ ರೂ ಬಹುಮಾನವಿರುತ್ತದೆ.
ಮೂರನೇ ಸುತ್ತಿನ ಹೆಸರು - ಮಿಸ್ಸಿಂಗ್ ಲಿರಿಕ್, ಇಲ್ಲಿ ಒಂದು ಹಾಡನ್ನು ಕೇಳಿಸಿ ಮಧ್ಯದಲ್ಲಿ ಅದರ ಒಂದು ಪದವನ್ನು ಮ್ಯೂಟ್ ಮಾಡಲಾಗುತ್ತೆ. ಸ್ಪರ್ಧಿಗಳು ಹಾಗೆ ಮ್ಯೂಟ್ ಆಗಿರೋ ಪದವನ್ನು ಗ್ರಹಿಸಿ ಹಾಡಬೇಕು. ಇದು ೨ ಸುತ್ತಿನ ಸ್ಪರ್ಧೆಯಾಗಿದ್ದು ಪ್ರತಿ ಸುತ್ತಿಗೂ ರೂ.೧೦,೦೦೦/- ಬಹುಮಾನವಿರುತ್ತದೆ.
ಕೊನೆಯ ಸುತ್ತಿನ ಹೆಸರು ಹಾಡು ನಿಮ್ಮ ಪಾಡು ಇದೊಂದು ಆಕರ್ಷಕ ಸುತ್ತಾಗಿದ್ದು. ಇಲ್ಲಿ ಸ್ಪರ್ಧಿಗೆ ಹಾಡನ್ನು ಹಾಡಲು ಕೊಡಲಾಗುತ್ತದೆ. ಹಾಗೆ ಹಾಡುವಾಗ ಇನ್ನೊಬ್ಬ ವ್ಯಕ್ತಿ ಅವರು ಹಾಡದಂತೆ ಅಡ್ಡಿಪಡಿಸುತ್ತಾನೆ. ಈ ಅಡಚಣೆಯ ನಡುವೆಯೂ ಸ್ಪರ್ಧಿ ಹಾಡನ್ನು ಹಾಡಬೇಕು. ಈ ಸುತ್ತಿನ ವಿಜೇತರನ್ನು ಆಯ್ಕೆ ಮಾಡುವ ಅವಕಾಶವಿರುವುದು ವೀಕ್ಷಕರಿಗೆ! ಇದು ಕೇವಲ ಒಂದು ಸುತ್ತಿನ ಸ್ಪರ್ಧೆಯಾಗಿದ್ದು ರೂ.೨೫,೦೦೦/- ರೂ ಬಹುಮಾನವಿರುತ್ತದೆ. ನಾಲ್ಕು ಸುತ್ತಿನ ಒಟ್ಟು ಬಹುಮಾನ ರೂ.೧,೦೦,೦೦೦/- ಆಗಿದೆ.
ಏಂಜಲ್ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಸಂಸ್ಥೆ ಸಿಂಪಲ್ಲಾಗೊಂದು ಸಿಂಗಿಂಗ್ ಷೋವನ್ನು ನಿರ್ಮಾಣ ಮಾಡುತ್ತಿದ್ದು ಏಪ್ರಿಲ್ ೪ ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ೯ ರಿಂದ ೧೦ ರವರೆಗೆ ಈ ಶೋ ಪ್ರಸಾರವಾಗಲಿದೆ. ಈ ಕಾನ್ಸೆಪ್ಟ್ನಲ್ಲಿರುವ ವಿಶೇಷತೆ ನೋಡುಗರಿಗೆ ಇಷ್ಟವಾಗುತ್ತದೆ ಎಂದು ವಾಹಿನಿಯ ಬಿಸಿನೆಸ್ ಹೆಡ್ ಸಿಜು ಪ್ರಭಾಕರ್ ಮತ್ತು ಪ್ರೋಗ್ರಾಂ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.